ಮ್ಯಾಕ್‍ಮಿಲನ್, ಹೆರಾಲ್ಡ್
1894--1966 ಬ್ರಿಟನ್ನಿನ ಪ್ರಧಾನ ಮಂತ್ರಿ (ಜನವರಿ 1957--ಅಕ್ಟೋಬರ್1963) : ಈತನ ಪೂರ್ಣ ಹೆಸರು ಮ್ಯಾಕ್‍ಮಿಲನ್ ಮೌರೈಸ್ ಹೆರಾಲ್ಡ್. 10 ಫೆಬ್ರವರಿ 1894ರಲ್ಲಿ ಲಂಡನ್ನಿನಲ್ಲಿ ಜನಿಸಿದ. ಈತನ ತಾಯಿ ಅಮೆರಿಕನ್ ಮಹಿಳೆ. ಮ್ಯಾಕ್‍ಮಿಲನ್ ಪ್ರಕಟಣಾಸಂಸ್ಥೆಯ ಸ್ಥಾಪಕರ ಮೊಮ್ಮಗನೀತ. ಆಕ್ಸ್‍ಫರ್ಡ್‍ನ ಬಲಿಯೊಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ. ಒಂದನೆಯ ಮಹಾಯುದ್ಧದ ಅನಂತರ ರಾಜಕೀಯಕ್ಕೆ ಪ್ರವೇಶಿಸಿದ. 1929--31 ಅವಧಿಯನ್ನು ಬಿಟ್ಟು 1920--48ರ ತನಕ ಮ್ಯಾಕ್‍ಮಿಲನ್ ಪ್ರಕಟಣಾಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದ. 1924ರಲ್ಲಿ ಕನ್ಸರ್ವೇಟಿವ್ ಪಕ್ಷದ ಸಾಮಾನ್ಯ ಸಭೆಯ ಸದಸ್ಯನಾಗಿ ಚುನಾಯಿತನಾದ. ಅನಂತರ 1924, 1929, 1931 ಮತ್ತು 1964ನೆಯ ಇಸವಿಗಳಲ್ಲಿ ಸತತವಾಗಿ ಪುನರಾಯ್ಕೆಗೊಂಡ. ಚರ್ಚಿಲ್ಲನ ಸರ್ಕಾರವನ್ನು ಅತ್ಯಂತ ಕಟುವಾಗಿ ಟೀಕಿಸಿದ.    

	1942ರಲ್ಲಿ ಬ್ರಿಟನ್ನಿನ ಪೂರೈಕೆ ಸಚಿವಾಲಯದ ಕಾರ್ಯದರ್ಶಿಯಾದ. ಮುಂದೆ ಹತ್ತು ತಿಂಗಳೊಳಗೆ ಈತನನ್ನು ವಸಾಹತು ಪ್ರದೇಶಗಳ ಅಧೀನ ಕಾರ್ಯದರ್ಶಿಯಾಗಿ ವಾಯವ್ಯ ಆಫ್ರಿಕಕ್ಕೆ ಕಳುಹಿಸಲಾಯಿತು. ಮೆಡಿಟರೇನಿಯನ್ ಪ್ರದೇಶದ ಪ್ರಮುಖ ಕೇಂದ್ರಕ್ಕೆ ಮಿತ್ರಪಕ್ಷಗಳ ದಳದ ಬ್ರಿಟಿಷ್ ವಸತಿ ಸಚಿವನಾದ. ಅಲ್ಲಿ ಮಿತ್ರ ಪಕ್ಷಗಳ ಸೈನ್ಯದ ಮಹಾದಂಡನಾಯಕನೂ ಅಮೆರಿಕದ ಜನರಲ್ಲನೂ (ಅನಂತರ ಅಧ್ಯಕ್ಷ) ಆದ ಐಸೆನ್‍ಹೋವರ್ ಜೊತೆಗೆ ಉತ್ತಮ ಸ್ನೇಹ ಸಂಬಂಧ ಬೆಳೆಸಿದ. ಫ್ರೆಂಚ್ ಸೈನ್ಯಾಧಿಕಾರಿ ಚಾಲ್ರ್ಸ್ ಡಿ ಗಾಲೆ ಮತ್ತು ಹೆನ್ರಿ ಜಿರಾರ್ಡ್‍ರ ನಡುವಣ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿದ.   

	ಚರ್ಚಿಲ್ಲರ ನೇತೃತ್ವದ ಉಸ್ತುವಾರಿ ಸರ್ಕಾರದಲ್ಲಿ ವಾಯುಯಾನ ಕಾರ್ಯದರ್ಶಿಯಾಗಿಯೂ (ಮೇ--ಜುಲೈ 1945), 1951ರಲ್ಲಿ ಕನ್ಸರ್ವೇಟಿವ್ ಪಕ್ಷ ಪುನಃ ಅಧಿಕಾರಕ್ಕೆ ಬಂದಾಗ ವಸತಿ ಮತ್ತು ಸ್ಥಳೀಯ ಸಂಸ್ಥೆಗಳ (ಅಕ್ಟೋಬರ್ 1951) ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿಯೂ 1954ರ ತನಕ ಕಾರ್ಯನಿರ್ವಹಿಸಿದ. 1954ರ ಅಕ್ಟೋಬರ್‍ನಲ್ಲಿ ರಕ್ಷಣಾ ಮಂತ್ರಿಯಾದ. ಚರ್ಚಿಲ್ಲನ ಅನಂತರ ಬಂದ ಸರ್ ಆಂತೋನಿ ಈಡನ್‍ನ ಮಂತ್ರಿಮಂಡಲದಲ್ಲಿ 1955 ಏಪ್ರಿಲ್‍ನಲ್ಲಿ ವಿದೇಶೀ ಕಾರ್ಯದರ್ಶಿಯಾಗಿಯೂ 1955 ಡಿಸೆಂಬರ್‍ನಲ್ಲಿ ರಾಷ್ಟ್ರೀಯ ಖಜಾನಾ ಮುಖ್ಯಾಧಿಕಾರಿ ಆಗಿಯೂ ನೇಮಕಗೊಂಡ. ಈ ಅವಧಿಯಲ್ಲಿ ಮ್ಯಾಕ್‍ಮಿಲನ್ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸತತವಾಗಿ ಶ್ರಮಿಸಿದ. 1957 ಜನವರಿ 10ರಂದು ಈಡನ್‍ನ ಉತ್ತರಾಧಿಕಾರಿಯಾಗಿ ದೇಶದ ಪ್ರಧಾನಮಂತ್ರಿಯಾಗಿ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಆಯ್ಕೆಗೊಂಡ. ಈತನ ನೇತೃತ್ವದಲ್ಲಿ 1959ರ ಅಕ್ಟೋಬರ್‍ನಲ್ಲಿ ಸಾಮಾನ್ಯ ಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಈತನ ಪಕ್ಷ ಜಯಪಡೆಯಿತು. ಶಾಸಕಾಂಗ ಪಕ್ಷ ಈತನನ್ನು ಪ್ರಧಾನ ಮಂತ್ರಿಯಾಗಿ ಮರುಆಯ್ಕೆ ಮಾಡಿತು.    

	ಪ್ರಧಾನಿಯಾದ ತರುವಾಯ ಅಂತಾರಾಷ್ಟ್ರೀಯಮಟ್ಟದಲ್ಲಿ ಉತ್ತಮ ಸ್ನೇಹಪರ ಸಂಬಂಧಗಳನ್ನು ರೂಪಿಸುವ ಸಲುವಾಗಿ ವಿವಿಧ ದೇಶಗಳ ನಾಯಕರ ಜೊತೆ ವಿಚಾರವಿನಿಮಯ ನಡೆಸಲು ಅಪಾರವಾಗಿ ಪ್ರವಾಸಮಾಡಿದ. ಇದಕ್ಕಾಗಿ ಅಮೆರಿಕದ ಅಧ್ಯಕ್ಷರಾಗಿದ್ದ ಡ್ವೈಟ್ ಡಿ ಐಸೆನ್ ಹೋವರ್ ಮತ್ತು ಜಾನ್ ಎಫ್. ಕೆನಡಿ ಸಂಗಡ ಉತ್ತಮ ಸಂಬಂಧವನ್ನು ಏರ್ಪಡಿಸಿಕೊಂಡು, ಬ್ರಿಟನ್ನಿನ ರಕ್ಷಣಾ ಪಡೆಯ ಸಬ್‍ಮೆರಿನ್‍ಗಳಿಗೆ ಅಗತ್ಯವಾಗಿದ್ದ ಕ್ಷಿಪಣಿಗಳನ್ನು ಪಡೆಯುವಲ್ಲಿ ಯಶಸ್ವಿ ಆದ. ರಷ್ಯದ ಪ್ರಧಾನ ಮಂತ್ರಿಯಾಗಿದ್ದ ನಿಕಿಟೌ ಖ್ರುಶ್ಚೆವ್ ಜೊತೆಗೂ ಉತ್ತಮ ಸಂಬಂಧವೇರ್ಪಡಿಸಿಕೊಂಡ. ಬೇರೆ ದೇಶಗಳ ವರಿಷ್ಠರ ಸಂಗಡ ಮಾತುಕತೆ ನಡೆಸುವುದರ ಮೂಲಕ ಉತ್ತಮ ಬಾಂಧವ್ಯ ಹೊಂದಬಹುದು, ಸಂಧಾನಗಳನ್ನು ಏರ್ಪಡಿಸಿಕೊಳ್ಳಬಹುದೆಂದು ಈತ. ನಂಬಿದ್ದ ಸಂಶಯಗಳಿಂದ ಮುರಿದು ಹೋಗುತ್ತಿದ್ದ ಪ್ಯಾರಿಸ್ ಒಪ್ಪಂದವನ್ನು ಯಶಸ್ವಿಯಾಗುವಂತೆ ಪರಿವರ್ತಿಸಿದ (1960 ಮೇ). ಅಮೆರಿಕದಿಂದ ಬ್ರಿಟನ್‍ಗೆ ತರಿಸಿಕೊಂಡ ನ್ಯೂಕ್ಲಿಯರ್ ಕ್ಷಿಪಣಿಗಳ ದೆಸೆಯಿಂದ ಆಗ ಫ್ರಾನ್ಸ್‍ನ ಅಧ್ಯಕ್ಷನಾಗಿದ್ದ ಜನರಲ್ ಡಿ. ಗಾಲೆಗೆ ಅಸಮಾಧಾನ ಉಂಟಾಯಿತು. ತತ್ಫಲವಾಗಿ 1963ರಲ್ಲಿ ಪ್ರಧಾನಿ ಮ್ಯಾಕ್‍ಮಿಲನ್ ಇಂಗ್ಲೆಂಡನ್ನು ಯುರೋಪಿನ ಆರ್ಥಿಕ ಸಮುದಾಯ ವ್ಯವಸ್ಥೆಗೆ ಸದಸ್ಯರಾಷ್ಟ್ರವನ್ನಾಗಿಸಲು ಎಷ್ಟೇ ಯತ್ನಿಸಿದರೂ ಫ್ರಾನ್ಸ್ ತನ್ನ `ವೀಟೋ ಅಧಿಕಾರವನ್ನು ಚಲಾಯಿಸುವುದರ ಮೂಲಕ ಅದನ್ನು ತಡೆಗಟ್ಟಿತು. 1961ರಿಂದ ಕಾಣಿಸಿಕೊಂಡಿದ್ದ ಆರ್ಥಿಕ ಮುಗ್ಗಟ್ಟೂ ಸೇರಿ ಈತನ ಸರ್ಕಾರಕ್ಕೆ ಬಲವಾದ ಪಟ್ಟು ಬಿತ್ತು. ರಕ್ಷಣಾಮಂತ್ರಿಯಾಗಿದ್ದ ಜಾನ್‍ಫ್ಯೂಮೊ ರಾಜೀನಾಮೆ ನೀಡಿದ. 1963ರ ಜೂನ್ ತಿಂಗಳಲ್ಲಿ, 1963ರ ಜುಲೈ ತಿಂಗಳಲ್ಲಿ ಬ್ರಿಟನ್, ಅಮೆರಿಕ ಮತ್ತು ರಷ್ಯ ದೇಶಗಳು ಸೇರಿ ಏರ್ಪಡಿಸಿದ್ದ `ನ್ಯೂಕ್ಲಿಯರ್ ಪರೀಕ್ಷಾ ನಿಷೇಧ ಒಪ್ಪಂದದಿಂದ ಈತನ ವ್ಯಕ್ತಿ ಪ್ರತಿಷ್ಠೆ ಸ್ವಲ್ಪಮಟ್ಟಿಗೆ ಹೆಚ್ಚಿತು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಅನಾರೋಗ್ಯಪೀಡಿತನಾಗಿ ತನ್ನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ (8-10-63). 1964ರಲ್ಲಿ ಸೆಪ್ಟೆಂಬರ್‍ನಲ್ಲಿ ಸಾಮಾನ್ಯ ಸಭೆಯ ಸದಸ್ಯತ್ವ ಮುಗಿದುಹೋದ ತರುವಾಯ ಹಲವಾರು ಪುಸ್ತಕಗಳನ್ನು ಈತ ಬರೆದ. ತನ್ನೆಲ್ಲ ಪುಸ್ತಕಗಳಲ್ಲಿ ಉದ್ಯೋಗ ಪೂರಿತ ಯೋಜನೆಗಳನ್ನು ಮತ್ತು ಉದಾರ ಆರ್ಥಿಕ ನೀತಿಗಳನ್ನು ಪ್ರತಿಪಾದಿಸಿದ್ದಾನೆ.     

	ವಿಂಡ್ಸ್ ಆಫ್ ಚೇಂಜ್, 1914-39(1966); ದಿ ಬ್ಲಾಸ್ಟ್ ಆಫ್ ವಾರ್, 1939-45(1967); ಟೈಡ್ಸ್ ಆಫ್ ಫಾರ್ಚೂನ್, 1945-55(1969); ರೈಡಿಂಗ್ ದಿ ಸ್ಟಾರ್ಮ್, 1956-59(1971); ಪಾಯಿಂಟಿಂಗ್ ದಿ ವೇ, 1959-61(1972); ಅಟ್ ದಿ ಎಂಡ್ ಆಫ್ ದಿ ಡೇ, 1961-63(1973), ಮತ್ತು ದಿ ಪಾಸ್ಟ್ ಮಾಸ್ಟರ್ಸ್: ಪಾಲಿಟಿಕ್ಸ್ ಅಂಡ್ ದಿ ಪಾಲಿಟಿಷಿಯನ್ಸ್, 1906-39(1975)-ಇವು ಮಾಕ್‍ಮಿಲನ್‍ನ ಕೃತಿಗಳು. ಈತ 29 ಡಿಸೆಂಬರ್ 1986ರಲ್ಲಿ ಇಂಗ್ಲೆಂಡಿನ ಬರ್ಚ್‍ಗ್ರೋ ಎಂಬಲ್ಲಿ ನಿಧನನಾದ.  
 	(ಬಿ.ಕೆ.ಸಿ.ಜಿ.; ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ